ಸದ್ದಿಲ್ಲದೇ ಪಸರಿಸುತ್ತಿದೆ ವಿಚ್ಛೇದನ ಎಂಬ ಮಾರಿ!
ಸುಂದರ ವೈವಾಹಿಕ ಬದುಕು ಯಾರಿಗೆ ಬೇಡ ಹೇಳಿ? ಆದರೆ ಇತ್ತೀಚಿನ ಬೆಳವಣಿಗೆ ನೋಡುತ್ತಾ ಹೋದರೆ ವಿಚಿತ್ರ ವಿಚಿತ್ರ ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲಿ ಕೌಟುಂಬಿಕ ಜೀವನಕ್ಕೆ ಛೇದ ಎಂಬಂತೆ ವಿಚ್ಛೇದನ ಸಮಸ್ಯೆ ಉಲ್ಬಣಿಸುತ್ತಿದೆ ! ಹಿಂದೆ ಒಂದು ಲೇಖನದಲ್ಲಿ ಹೇಳಿದ್ದೆ ಒಂದು ಕಾಫಿಗೂ,ಒಂದು ಸಹಿಗೆ ಕೂಡ ಡಿವೋರ್ಸ ಕೊಟ್ಟವರಿದ್ದಾರೆಂದು. ಈ ವಿಷಯದ ಮೇಲೆ ಮತ್ತೊಮ್ಮೆ ಬರೆಯಲು ನನಗೆ ಮನಸ್ಸಿರಲಿಲ್ಲ ,ಆದರೆ ಇತ್ತೀಚಿನ ಒಂದು ಘಟನೆ ಕೇಳಿ ಬಹಳೇ ನೋವಾಯಿತು. ಅದಕ್ಕೆ ಮತ್ತೊಮ್ಮೆ ಬರೆಯಲು ಅಣಿಯಾದೆ . ಬನ್ನೀ ಅದೇನೂ ಅಂತ ತಿಳಿಯೋಣ !
ಬಿ.ಆರ್.ಚೋಪ್ರಾ ಮಹಾಭಾರತ ಕೃಷ್ಣ ಪಾತ್ರದ ಖ್ಯಾತಿಯ ಶ್ರೀನಿತೀ಼ಶ ಭಾರದ್ವಾಜ ಅವರಿಂದ ಅವರ ಪತ್ನಿ ಸ್ಮಿತಾ ವಿಚ್ಛೇದನ ಪಡೆದದ್ದು. ಇಬ್ಬರೂ ದೊಡ್ಡ ಹುದ್ದೆಯಲ್ಲಿದ್ದವರು. ಈರ್ವರೂ 20 ವರ್ಷಗಳ ಜೀವನ ನಡೆಸಿದ್ದಾರೆ ಈ ದಂಪತಿಗಳಿಗೆ ಇಬ್ಬರು ಅವಳಿ-ಜವಳಿ ಮಕ್ಕಳು ಬೇರೆ . ಆದರೆ ಇಲ್ಲಿಯವರೆಗೆ ವಿಚ್ಛೇದನ ಕಾರಣ ತಿಳಿದು ಬಂದಿಲ್ಲ. ಇವರ ಹೊರತಾಗಿ ಸಮಂತಾ ಮತ್ತು ನಾಗಚೈತನ್ಯ ,ನಟ ಧನುಷ್ ರವರ ವಿಚ್ಛೇದನಗಳು. ಯಾಕೆ ಇವರ ಉದಾಹರಣೆ ಎಂದರೆ ಇವರು ನಮ್ಮ ನೆಚ್ಚಿನ ನಾಯಕ-ನಾಯಕಿಯರಲ್ಲವೇ , ಇವರು ಮಾಡುವುದೆ ನಾವು ಅನುಕರಿಸುವುದಿಲ್ಲವೇ? ವಿಚ್ಛೇದನಲ್ಲಿ ಸುಖವಿದೆ ಅಂತ ತಿಳಿದು ಹಾಸ್ಯಾಸ್ಪದ ಕಾರಣಗಳನ್ನು ಕೊಟ್ಟು ವಿಚ್ಛೇದನ ಪಡೆಯುತ್ತಿದ್ದಾರೆ ನಮ್ಮ ಜನ . ಇದರ ಸಲುವಾಗಿಯೆ ಎಷ್ಟೋ ಪ್ರಾಣಹಾನಿಯಾಗಿವೆ , ಆಗುತ್ತಿವೆ. ಸಕಲ ಚರಾಚರ ವಸ್ತುಗಳಲ್ಲಿ ಬಹಳ ಬುದ್ಧಿವಂತ ಅನ್ನಿಸಿಕೊಂಡವರು ನಾವೇ ಹೀಗೆ ಮಾಡಿದರೆ ಹೇಗೆ? ಇದನ್ನು ತಡೆಯಬೇಕಲ್ಲವೇ?
ಹಾಗಿದ್ದರೇ ತಡೆಯವರು ಯಾರು ? ನಾಂದಿ ಹಾಡಿದವರೇ ತಡಯಬೇಕು ಅಂದರೆ ನಾವೇ ತಡೆಯಬೇಕು. ಚಿಕ್ಕವನಿದ್ದಾಗ ಒಮ್ಮೆ ಶ್ರೀಸತ್ಯಾತ್ಮತೀರ್ಥರ ಪ್ರವಚನದ ಮಾತು ನನ್ನ ಕಿವಿಗೆ ಬಿದ್ದಿತ್ತು , ಅದೇನೆಂದರೆ ʼ ಮನೆಯಲ್ಲಿ ಒಬ್ಬ ಅಜ್ಜ ಅಜ್ಜಿ ವಾಕಿಂಗ ಹೋಗುವ ಚಿತ್ರವನ್ನ ಗೋಡೆಯ ಮೇಲೆ ತೂಗು ಹಾಕಿ ,ದಿನಾಲು ಆ ಚಿತ್ರವನ್ನ ನೋಡಿ ಯೋಚಿಸಿ ಅವರು ಇಷ್ಟು ವಯಸ್ಸಾದರು ಇನ್ನು ಜೊತೆಗೆ ಇದ್ದಾರಲ್ಲ ಎಂದು?, ಅದ್ಭುತವಲ್ಲವಾ ಇದು? ಯಾಕೆಂದರೆ ಅವರಿಗೆ ಗೊತ್ತು ʼ ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ ʼ ಅಂತ ಅವುಗಳನ್ನ ಎದುರಿಸಿ ಬದುಕುತ್ತಿರುವವರು ಅವರು. ಅಜ್ಜ-ಅಜ್ಜಿ ಹೇಳುಔ ಕಥೆ ಕೇಳದೆ ಇರಬಹುದು ನಾವು ಆದರೆ ಅಜ್ಜ-ಅಜ್ಜಿಯ ಗಟ್ಟಿ ಜೀವನ ನಮ್ಮ ಧ್ಯೇಯವಾಗಲಿ. ಅಜ್ಜ-ಅಜ್ಜಿಯ ಬದುಕೇ ನಮಗೆ ಬಾಳಿನಲ್ಲಿಯೂ ನಂಬಿಕೆ ಬರಿಸಲಿ ಅಂತ ಹೇಳಿ, ಅದೇನೇ ಗ್ರಾಮರ್ ಮಿಸ್ಟೇಕ ಇದ್ರು ಆಶೀರ್ವದಿಸಿ.
-ಯತ್ಸಾರಭೂತಂ ತದುಪಾಸನೀಯಂ